ಬೆಂಗಳೂರು 24°C Breaking Kannada News
DIGITAL KANNADA NEWS Cine Samachara
← Back to Homepage
Published News Report

ಅಣ್ಣಾವ್ರ ಜೊತೆ ಪತ್ನಿಯಾಗಿ ಅಕ್ಕನಾಗಿ ತಾಯಿಯಾಗಿ ನಟಿಸಿ ಸಾಹುಕಾರ್ ಜಾನಕಿ ವಿಶಿಷ್ಟ ದಾಖಲೆ

Narayana. M 1 ಸೆಪ್ಟೆಂಬರ್ 2026, 5:34 ಅಪರಾಹ್ನ ಮುಖ್ಯ ಸುದ್ದಿ
ಅಣ್ಣಾವ್ರ ಜೊತೆ ಪತ್ನಿಯಾಗಿ ಅಕ್ಕನಾಗಿ ತಾಯಿಯಾಗಿ ನಟಿಸಿ ಸಾಹುಕಾರ್ ಜಾನಕಿ ವಿಶಿಷ್ಟ ದಾಖಲೆ

ಬಹುಭಾಷಾ ನಟಿ ಸಾಹುಕಾರ್ ಜಾನಕಿ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿ ಸೈ ಎನಿಸಿಕೊಂಡಿದ್ದರು. ಡಾ. ರಾಜ್‌ಕುಮಾರ್ ಜೊತೆಗೆ ತೆರೆ ಹಂಚಿಕೊಂಡು ಕಮಾಲ್ ಮಾಡಿದ್ದರು. ಅಣ್ಣಾವ್ರ ಜೊತೆ ಬೇರೆ ಬೇರೆ ತಲೆಮಾರಿನ ಪಾತ್ರಗಳಲ್ಲಿ ಅವರು ನಟಿಸಿದ್ದು ವಿಶೇಷ. ನಿಮಗೆ ಗೊತ್ತಾ ಒಂದೇ ವರ್ಷದಲ್ಲಿ ತೆರೆಕಂಡಿದ್ದ ಎರಡು ಸಿನಿಮಾಗಳಲ್ಲಿ ಪತ್ನಿಯಾಗಿ ಹಾಗೂ ಅಕ್ಕನ ಪಾತ್ರದಲ್ಲಿ ಅವರು ನಟಿಸಿದ್ದರು. ಎಲ್ಲವೂ ಸಿನಿಮಾ ಪಾತ್ರಗಳೇ ತಾನೇ, ಇಂತಹ ಅದ್ಭುತ ನಟನಿಗೆ ತಾಯಿಯಾಗಿ ನಟಿಸಿದ್ರೆ ಏನು? ತಾಯಿ ಆದ್ರು ತಪ್ಪಿಲ್ಲ, ಇಂತಹ ಒಳ್ಳೆ ಮಗ ಇದ್ರೆ ಎಷ್ಟು ಗರ್ವಪಡುತ್ತಿದ್ದೆ ಅಲ್ವಾ ಎನ್ನುತ್ತಿದ್ದರು.

ಕನ್ನಡ ಚಿತ್ರರಂಗದಲ್ಲಿ ಡಾ. ರಾಜ್‌ಕುಮಾರ್ ಹಾಗೂ ಸಾಹುಕಾರ್ ಜಾನಕಿ ಕಾಂಬಿನೇಷನ್ ಹಿಟ್ ಆಗಿತ್ತು. 'ಮಹಿಷಾಸುರ ಮರ್ದಿನಿ' ಚಿತ್ರದಲ್ಲಿ ಇಬ್ಬರೂ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದರು. ಬಳಿಕ 'ನವಕೋಟಿ ನಾರಾಯಣ', 'ಸಾಕು ಮಗಳು', 'ಕನ್ಯಾರತ್ನ', 'ತಾಯಿಗೆ ತಕ್ಕ ಮಗ' ಹಾಗೂ 'ಶಬ್ದವೇಧಿ' ಸಿನಿಮಾಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. 1963ರಲ್ಲಿ ತೆರೆಕಂಡ 'ಸಾಕು ಮಗಳು' ಚಿತ್ರದಲ್ಲಿ ಸತಿ-ಪತಿಯಾಗಿ ನಟಿಸಿದ್ದರು. ಅದೇ ವರ್ಷ 'ಕನ್ಯಾರತ್ನ' ಚಿತ್ರದಲ್ಲಿ ಅಕ್ಕ-ತಮ್ಮನಾಗಿ ತೆರೆಮೇಲೆ ಬಂದು ಅಚ್ಚರಿ ಮೂಡಿಸಿದ್ದರು. 'ಕನ್ಯಾರತ್ನ' ಒಂದರ್ಥದಲ್ಲಿ ಮಹಿಳಾ ಪ್ರಧಾನ ಸಿನಿಮಾ. ಸಾಕುಕಾರ್ ಜಾನಕಿ ಅವರ ಶಾಂತ ಪಾತ್ರದ ಸುತ್ತಾ ಕಥೆ ಸಾಗುತ್ತದೆ.

ಬೇಜವಾಬ್ದಾರಿ ತಮ್ಮ ರಾಜು(ಡಾ. ರಾಜ್‌ಕುಮಾರ್) ತಿದ್ದಿ ತೀಡುವ ಅಕ್ಕನ ಪಾತ್ರದಲ್ಲಿ ಸಾಕುಕಾರ್ ಜಾನಕಿ ಗಮನ ಸೆಳೆದಿದ್ದರು. 15 ವರ್ಷಗಳ ಬಳಿಕ ಬಂದ 'ತಂದೆಗೆ ತಕ್ಕ ಮಗ' ಚಿತ್ರದಲ್ಲಿ ಅಣ್ಣಾವ್ರಿಗೆ ತಾಯಿಯ ಪಾತ್ರದಲ್ಲಿ ಜಾನಕಿ ನಟಿಸಿದ್ದು ವಿಶೇಷ. ವರನಟನ ಕೊನೆಯ ಚಿತ್ರದ 'ಶಬ್ಧವೇದಿ' ಚಿತ್ರದಲ್ಲೂ ಅವರ ನಟನೆ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಆಂಧ್ರದ ರಾಜಮಂಡ್ರಿ ಮೂಲದ ಸಾಹುಕಾರ್ ಜಾನಕಿ ಕನ್ನಡ ಸಿನಿಮಾಗಳಲ್ಲಿ ನಟಿಸಿ ಸ್ಪಷ್ಟವಾಗಿ ಕನ್ನಡ ಮಾತನಾಡುವುದು ಕಲಿತ್ತಿದ್ದರು. ಕನ್ನಡದಲ್ಲೇ ಅಣ್ಣಾವ್ರ ಜೊತೆ ಮಾತನಾಡುತ್ತಿದ್ದರು.

ಡಾ. ರಾಜ್‌ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದ ಘಟನೆ ಗೊತ್ತೇಯಿದೆ. ಅಲ್ಲಿಂದ ಬಿಡುಗಡೆಯಾಗಿ ಬಂದಮೇಲೆ ಅವರೊಟ್ಟಿಗೆ ಮಾತನಾಡಿದ ನೆನಪುಗಳನ್ನು ಜಾನಕಿ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು. ರಾಜ್‌ಕುಮಾರ್ ಅವರಿಗೆ ವೀರಪ್ಪನ್ ಅಷ್ಟೆಲ್ಲಾ ಕಷ್ಟ ಕೊಟ್ಟರೂ ಅವರು ಅವನ ಬಗ್ಗೆ ಒಳ್ಳೆ ಮಾತುಗಳನ್ನು ಆಡಿದ್ದರು. ಅಂತಹ ಆದರ್ಶ ವ್ಯಕ್ತಿ ರಾಜ್‌ಕುಮಾರ್. ಅವರು ಕೋಪಿಸಿಕೊಂಡಿದ್ದನ್ನು ನಾನು ನೋಡಲೇ ಇಲ್ಲ. ಅವರು ಮಹಾನ್ ಯೋಗಿ ಎಂದಿದ್ದರು.